top of page

ಕನ್ನಡ  ಜ್ಞಾನ  ಪರಂಪರೆಗಳು

ಮೇಟಿ ಮಲ್ಲಿಕಾರ್ಜುನ(ಸಂಚಾಲಕರು)  ಕಾರ್ಯಕಾರಿ ಸಮಿತಿ ಸದಸ್ಯರು: ಜೆ .ಕೆ ಸುರೇಶ್, ಜಿಎಸ್ಆರ್ ಕೃಷ್ಣನ್, ಷಣ್ಮುಖ ಮತ್ತು ವೀಣಾ ಜೋಶಿ

ಕನ್ನಡ ಜ್ಞಾನ ಪರಂಪರೆಗಳು: ಈ ಅಧಿವೇಶನ ಯಾಕಾಗಿ?


ಕನ್ನಡವು ಒಂದು ವಿಶಿಷ್ಟವಾದ, ಶಾಸ್ತ್ರೀಯ ಹಾಗೂ ಪಾರಂಪರಿಕ ಭಾಷೆಯಾಗಿದೆ. ಕನ್ನಡ ಭಾಷೆಯಲ್ಲಿ ಬೇರೂರಿರುವ ವಿಭಿನ್ನವಾದ ಜ್ಞಾನ ಮೀಮಾಂಸೆಯ ಪರಂಪರೆಗಳು ಕಾಲಾಂತರದಲ್ಲಿ ಭಾರತದ ಇತರೆ ಭಾಷೆಗಳಿಗಿಂತ ವಿಶಿಷ್ಟವಾದ ಜ್ಞಾನ ವ್ಯವಸ್ಥೆಗಳು ರೂಪಗೊಳ್ಳಲು ಕಾರಣವಾಗಿವೆ. ಈ ಭಿನ್ನತೆಗಳು, ಜನರ ಹಾಗೂ ಅವರ ಪರಿಸರದ ಸಾಮಾಜಿಕ ಹಾಗೂ ಸಾಂಸ್ಕೃತಿಕ ವೈವಿಧ್ಯತೆಗಳಿಂದ ಹುಟ್ಟಿಕೊಂಡಿವೆ. ಈ ಜ್ಞಾನ ಶಿಸ್ತುಗಳು ಸಾಂಸ್ಕೃತಿಕವಾಗಿ ಶ್ರೀಮಂತವಾಗಿವೆ ಮತ್ತು ನಿರ್ದಿಷ್ಟವಾಗಿ ಕನ್ನಡಕ್ಕೆ ಸಂಬಂಧಿಸಿವೆ. ಕನ್ನಡ ಭಾಷೆ ಸಾಹಿತ್ಯ ,ಇತಿಹಾಸ ಹಾಗೂ ಸಂಸ್ಕೃತಿಗಳನ್ನು ಶೋಧಿಸುವ ಮೂಲಕ ಪ್ರತಿಯೊಂದು ಜ್ಞಾನ ಶಾಸ್ತ್ರದ ತಿರುಳನ್ನು ಅರ್ಥಮಾಡಿಕೊಳ್ಳಬಹುದು.

 

ಸಾರಾಂಶ : 


ಭಾಷೆ, ಸಂಸ್ಕೃತಿ ಹಾಗೂ ಅಧಿಕಾರಕ್ಕೆ ಸಂಬಂಧಿಸಿದಂತೆ ಜ್ಞಾನ ಮೀಮಾಂಸೆ ಹಾಗೂ ಅದರ ಪರಂಪರೆಗಳು ರೂಪಿಸಿರುವ ವಿಚಾರಗಳ ಕುರಿತು ಗಹನವಾದ ಪ್ರಶ್ನೆಗಳನ್ನು ಎತ್ತುವುದು ಕನ್ನಡ ಜ್ಞಾನ ಪರಂಪರೆ ಅಧಿವೇಶನದ ಮುಖ್ಯ ಉದ್ದೇಶವಾಗಿದೆ. ಜ್ಞಾನದ ಕಲ್ಪನೆಯು ಏಕಕಾಲದಲ್ಲಿ ಜ್ಞಾನ ರಾಜಕೀಯ ಹಾಗೂ ಅಧಿಕಾರವನ್ನು ಅವಲಂಬಿಸಿದೆ. ಕನ್ನಡದ ಸಂದರ್ಭದಲ್ಲಿ ಜ್ಞಾನ ರಾಜಕಾರಣ ಕುರಿತ ಪ್ರಶ್ನೆಗಳನ್ನು ಕೈಗೆತ್ತಿಕೊಳ್ಳಲು ಜ್ಞಾನ ಪರಂಪರೆಗಳು ಜ್ಞಾನಶಾಸ್ತ್ರಗಳ ರಾಜಕಾರಣ, ಸಾಂಸ್ಕೃತಿಕ ಆಚರಣೆಗಳು ಹಾಗೂ ಸಮಾಜ ರಚನೆ ಕುರಿತ ಚಿಂತನೆಗಳನ್ನು ಪರಿಗಣಿಸಬೇಕು. ಹಿಂದಿನಿಂದಲೂ ಗಂಡಾಳ್ವಿಕೆಯ ಭಾಗವಾಗಿರುವ ಭಾರತೀಯ ಹಾಗೂ ಪಾಶ್ಚಿಮಾತ್ಯ ಪ್ರಬಲ ಚಿಂತನಾ ಮಾದರಿಗಳು ಕನ್ನಡ ಜ್ಞಾನ ಪರಂಪರೆಗಳ ಮೇಲೆ ಹಿಡಿತ ಸಾಧಿಸಿವೆ. ಪರಿಣಾಮವಾಗಿ ಭಕ್ತಿ ಚಳುವಳಿಗಳು ,ಜಾನಪದ ಮಹಾಕಾವ್ಯ ಹಾಗೂ ಪರಂಪರೆಗಳು ತಮ್ಮದೇ ಅನುಭವದ ನೆಲೆಗಳಿಂದ ಪರ್ಯಾಯ ಜ್ಞಾನ ಪರಂಪರೆಗಳಾಗಿ ರೂಪ ತಳೆದು ಸಾಮಾಜಿಕ ,ರಾಜಕೀಯ ಚಟುವಟಿಕೆಗಳಿಗೆ ಹಾಗೂ ಜನಸಮುದಾಯಗಳ ಬದುಕಿಗೆ ಮಾರ್ಗದರ್ಶಿಯಾಗಿವೆ. ಒಟ್ಟಾರೆಯಾಗಿ, ಈ ಅಧಿವೇಶನದಲ್ಲಿ ಕನ್ನಡ ಜ್ಞಾನ ಪರಂಪರೆಗಳನ್ನು ಸಮಗ್ರವಾಗಿ ಅರ್ಥಮಾಡಿಕೊಳ್ಳಲು ಜ್ಞಾನಮೀಮಾಂಸೆಗಳು ಹಾಗೂ ಜ್ಞಾನ ಪರಂಪರೆಗಳ ಚೌಕಟ್ಟಿನಲ್ಲಿ ಜ್ಞಾನದ ಉತ್ಪಾದನೆ ಮತ್ತು ಸಾಮಾಜಿಕ ಸಂಬಂಧಗಳು ಹಾಗೂ ಉತ್ಪತ್ತಿಯಾಗಿರುವ ವಿವಿಧ ಬಗೆಯ ಜ್ಞಾನಗಳನ್ನು ಚರ್ಚೆಯ ಕೇಂದ್ರವಾಗಿಸಲಾಗುವುದು.

ಪ್ರಸ್ತಾವನೆ:

 

ಭಾರತವನ್ನು ಕೇವಲ ಒಂದು ರಾಷ್ಟ್ರ ಎಂದು ಹೇಳದೆ ಅದು ಒಂದು ನಾಗರಿಕತೆ ಎಂದು ಪರಿಗಣಿಸಬೇಕಾದರೆ ಅದರ ಇತಿಹಾಸವು ಅಲ್ಲಿಯ ಭಾಷೆಗಳ ವಿಕಾಸಶೀಲತೆ, ಸಂವಾದ ಮಾಡುವ, ಅಂತರ್ಗತಗೊಳಿಸುವ ಸಾಮರ್ಥ್ಯ ಹಾಗೂ ಅವುಗಳು ಪ್ರತಿನಿಧಿಸುವ ವಿವಿಧ ಜ್ಞಾನ ಶಿಸ್ತುಗಳ  ಕಥನವಾಗಬೇಕು. ಜನ ಸಮುದಾಯಗಳು ಲೋಕಜ್ಞಾನ ಮತ್ತು ವೈವಿಧ್ಯ ನಂಬಿಕೆಗಳನ್ನು ರೂಪಿಸುವಲ್ಲಿ ಭಾಷಾ ವೈವಿಧ್ಯತೆ ಅತ್ಯಂತ ಮುಖ್ಯವಾದದ್ದು. ಅಭಿವೃದ್ಧಿಯ ವಿಷಯದಲ್ಲಿ, ಭಾರತವು ಸ್ವಾತಂತ್ರ್ಯಗೊಂಡಾಗಿನಿಂದಲೂ ವೇಗವಾಗಿ ಬದಲಾಗುತ್ತಿರುವ ಜಗತ್ತಿನ ಜೊತೆ ಗಂಭೀರವಾಗಿ ತೊಡಗಿಸಿಕೊಂಡಂತಿಲ್ಲ. ಭಾಷೆಯಿಂದ ಒದಗುವ ಸಾಮಾಜಿಕ ,ಸಾಂಸ್ಕೃತಿಕ ಹಾಗೂ ತಾತ್ವಿಕ ಸಾಧನಗಳನ್ನು ಬಳಸಿಕೊಂಡು ಅರ್ಥಶಾಸ್ತ್ರ ಕಲೆ ,ವಿಚಾರ ,ಮನೋರಂಜನೆ ಸಂವಹನ ,ವ್ಯಾಪಾರ ಸೇರಿದಂತೆ ಸಮಾಜದ ಹಲವು ನಿರ್ಣಾಯಕ ವಲಯಗಳಲ್ಲಿ ಗಡಿ ದಾಟಿ ಬರುವ ಲೋಕ ದೃಷ್ಟಿಗಳು ,ತಾಂತ್ರಿಕತೆಗಳು ಅಥವಾ ರಾಚನಿಕ ಚಿಂತನೆಗಳನ್ನು ಅರ್ಥಮಾಡಿಕೊಳ್ಳಲು ಹಾಗೂ ಅಲ್ಲಿ ನಮ್ಮ ಚಿಂತನೆಗಳನ್ನು ಹಂಚಿಕೊಳ್ಳಲು ಇದರಿಂದ ಸಾಧ್ಯವಾಗಿಲ್ಲ. ಇದನ್ನು ಸಾಧಿಸುವಲ್ಲಿ ನಾವು ವಿಫಲರಾಗಿದ್ದೇವೆ ಎಂಬುದನ್ನು ಜಪಾನ್ ಮತ್ತು ಚೀನಾ ಉದಾಹರಣೆಗಳಿಂದ ತಿಳಿಯಬಹುದು. ಏಕರೂಪ ವ್ಯವಸ್ಥೆಯ ಮೂಲಕ ರಾಷ್ಟ್ರ ನಿರ್ಮಾಣ ಮಾಡಬೇಕು ಎಂಬ ತಪ್ಪು ನಂಬಿಕೆಯನ್ನು ಆಧರಿಸಿದ ಈ ವೈಫಲ್ಯವು ಭಾಷೆಗಳ ಅವಸಾನದ ಬಗ್ಗೆ ನಿರಾಸಕ್ತಿಯನ್ನು ಮೂಡಿಸಿದೆ.


ಈ ಎಲ್ಲ ವಿಚಾರಗಳನ್ನು ನಾವು ಹೇಗೆ ಅನುಸಂಧಾನ ಮಾಡಬಹುದು? ಭಾರತ ಉಪಖಂಡದ ರಾಷ್ಟ್ರೀಯತೆಗೆ ಎದುರಾಗಿ ಆಯಾ ಪ್ರದೇಶದ ಜ್ಞಾನ ಪರಂಪರೆಗಳಲ್ಲಿ ನೆಲೆಗೊಂಡಿರುವ ಭಾಷೆಗಳು ಜನಜೀವನದ ಎಲ್ಲಾ ಹಂತಗಳಲ್ಲಿ ಅವರ ನಂಬಿಕೆಗಳು ,ಸಾಮಾಜಿಕ, ನೈತಿಕ ,ಮೌಲ್ಯಗಳು ಹಾಗೂ ಪರಸ್ಪರ ಹಂಚಿಕೊಂಡ ಅನುಭವಗಳ ಮೂಲಕ ಜನರನ್ನು ಒಗ್ಗೂಡಿಸುತ್ತವೆ. ಈ ವಿಷಯವನ್ನು ನಮ್ಮ ಸಾಮಾಜಿಕ ಸನ್ನಿವೇಶದಲ್ಲಿಟ್ಟು ನೋಡಿದಾಗ, ಜ್ಞಾನ ಸಂಪ್ರದಾಯಗಳು ಆಧುನಿಕ ಅರ್ಥಶಾಸ್ತ್ರ ,ಸಾಮಾಜಿಕ ರಚನೆಗಳು ಹಾಗೂ ತಾತ್ವಿಕತೆಯ ಸವಾಲುಗಳನ್ನು ಎದುರಿಸಲು ಸಾಮೂಹಿಕ ಅಸ್ಮಿತೆಯ ಬೆಳವಣಿಗೆಯನ್ನು  ಸಾಧ್ಯವಾಗಿಸುವ ಭರವಸೆ ನೀಡುತ್ತವೆ.


ಭಾಷಿಕ ಅಭಿವ್ಯಕ್ತಿಗಳಲ್ಲಿರುವ ಜ್ಞಾನ ಪರಂಪರೆಗಳು (ಬರಹ ,ಮೌಖಿಕ ಪ್ರಕಾರಗಳು) ಸಾಮಾಜಿಕ ಬದಲಾವಣೆ, ಕ್ಷೋಭೆ, ರಾಜಕೀಯ ಅನಿಶ್ಚಿತತೆ, ಪ್ರಾಕೃತಿಕ ಮತ್ತು ಮಾನವ ಪ್ರಣೀತ ವಿಪತ್ತುಗಳು ಸೇರಿದಂತೆ ಹಲವು ಬಗೆಯ ಸವಾಲುಗಳನ್ನು ಎದುರಿಸಿದ ಕನ್ನಡ ದೇಶದ ಅನುಭವಗಳನ್ನು ಒಂದು ನಿದರ್ಶನವಾಗಿ ಪರಿಗಣಿಸಿ ಪರಾಮರ್ಶಿಸುವುದು ಈ ಅಧಿವೇಶನದ ಉದ್ದೇಶವಾಗಿದೆ. ಇಂತಹ ಕೆಲವು ಉದಾಹರಣೆಗಳನ್ನು ಇಲ್ಲಿ ನೋಡಬಹುದು: ಕನ್ನಡ ದೇಶದ ಸಂತ ಪರಂಪರೆ (ಭಕ್ತಿ ಚಳುವಳಿಯ ಸಂದರ್ಭ ಅದರ ಹಿಂದಿನ ಮತ್ತು ನಂತರದ ಕಾಲ), ಆಧುನಿಕ ಪೂರ್ವ ಬುದ್ಧಯುಗ, ಜೈನ ಧರ್ಮ ಹಾಗೂ ಬಹು ಆಯಾಮಗಳ ಹಿಂದೂ ಧರ್ಮದ ಕಾಲಘಟ್ಟ, ವಸಾಹತು ಕಾಲಘಟ್ಟ ,ಕನ್ನಡ ಸಾಮ್ರಾಜ್ಯಶಾಹಿಯ ಕಾಲದ ಸಾಮಾನ್ಯ ಜನರ ಭಾಷೆಯ ಸ್ವರೂಪ (ಚಾಲುಕ್ಯ, ರಾಷ್ಟ್ರಕೂಟ, ಸೇವಣ ಹೊಯ್ಸಳ ಮತ್ತು ಕರ್ನಾಟಕ ಸಾಮ್ರಾಜ್ಯ ಕಾಲಘಟ್ಟಗಳು), ಕರ್ನಾಟಕ ಏಕೀಕರಣ ಯೋಜನೆ ,ಹಿಂದಿ ವಿರೋಧಿ ಹೋರಾಟ ,ರೈತ ಚಳುವಳಿ, ಗೋಕಾಕ್ ಚಳುವಳಿ ಮುಂತಾದವು. ಇದರ ಜೊತೆಗೆ ಭಾಷೆ ಮತ್ತು ಸಾಮಾಜಿಕ ಅಭಿವೃದ್ಧಿಯ ನಡುವಿನ ಬಿಕ್ಕಟ್ಟುಗಳನ್ನು ಪರಿಹರಿಸಲು ಹಾಗೂ ಸಾಮಾಜಿಕ ಒಳಿತು ಮತ್ತು ನ್ಯಾಯಕ್ಕಾಗಿ ಕನ್ನಡದಂತಹ ಜ್ಞಾನ ಪರಂಪರೆಗಳು ನೀಡಿರುವ ಹೊಳಹುಗಳನ್ನು ಶೋಧಿಸಲು ಪ್ರಯತ್ನಿಸುತ್ತೇವೆ.

ಮೇಲಿನ ವಿಷಯಗಳ ಜೊತೆಗೆ ಇನ್ನೂ ಹಲವು  ಪ್ರಶ್ನೆಗಳನ್ನು ಅಧಿವೇಶನದಲ್ಲಿ ಚರ್ಚಿಸುವ ಅಗತ್ಯವಿದೆ:


ನಾವು ಆರಂಭದಲ್ಲಿಯೇ ಮೂರು ವಿಶಾಲ ವ್ಯಾಪ್ತಿಯ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು, ಅವುಗಳು ಕೇವಲ ಕನ್ನಡಕ್ಕೆ ಮಾತ್ರ ಸೀಮಿತವಾಗದೆ ಭಾರತದ ಯಾವುದೇ ಭಾಷೆಗಳಿಗೆ ಪ್ರಸ್ತುತವಾಗಿವೆ. ಆ ಪ್ರಶ್ನೆಗಳೆಂದರೆ: 
1. ಕನ್ನಡದ ಮೂಲಕ ನಾವು ಯಾವ ಬಗೆಯ ಜ್ಞಾನ ಪಡೆಯಬೇಕು?
2. ಕನ್ನಡದ ಮೂಲಕ ನಾವು ಪಡೆಯಬೇಕಿರುವ ಜ್ಞಾನವು ಇಂಗ್ಲಿಷ್, ಸಂಸ್ಕೃತ ಅಥವಾ ಇನ್ಯಾವುದೇ ಭಾಷೆಗಳಿಂದ ಪಡೆವ ಜ್ಞಾನದಂತಿರಬೇಕೆಯೇ?
3. ನಾವು ಪಡೆಯುವ ಜ್ಞಾನದ ಜೊತೆಗೆ ಅದರ ಚೌಕಟ್ಟುಗಳನ್ನು ಪಡೆದುಕೊಳ್ಳಬೇಕೆ? ಉದಾಹರಣೆಗೆ, ಜ್ಞಾನದ ಜೊತೆಗೆ ಅದರ ಆಕರಗಳನ್ನೂ ಎರವಲು ಪಡೆಯಬೇಕೆಯೇ?


ಈ ಪ್ರಶ್ನೆಗಳು ಕನ್ನಡ ಜ್ಞಾನ ಪರಂಪರೆಗಳ ಮತ್ತು ತಾತ್ವಿಕತೆಗಳ ಕೆಲವು ಮಹತ್ವದ ಕ್ಷೇತ್ರಗಳನ್ನು ಕೇಂದ್ರೀಕರಿಸುತ್ತವೆ. ಈ ಕ್ಷೇತ್ರಗಳು ಕನ್ನಡ ಭಾಷೆ, ಸಾಹಿತ್ಯ ,ಸಂಸ್ಕೃತಿ, ಸಮಾಜ, ರಾಜಕೀಯ, ಕೃಷಿ ,ಅಭಿವೃದ್ಧಿ, ಜಾನಪದ, ವಿಜ್ಞಾನ, ತಾಂತ್ರಿಕತೆ, ಮುಂತಾದ ಕ್ಷೇತ್ರಗಳ ಜೊತೆ ಪರಸ್ಪರ ಸಂಬಂಧವನ್ನು ಹೊಂದಿವೆ.


ಅಧಿವೇಶನಕ್ಕೆ ಸೂಚಿಸುವ ವಿಷಯಗಳು
1. ಯಾವ ಪರಂಪರೆಗಳನ್ನು ಕನ್ನಡದ ಮೂಲ ಜ್ಞಾನ ಪರಂಪರೆಗಳು ಎಂದು ಕರೆಯಲಾಗಿದೆ?
2. ಕಳೆದ ಎರಡು ಸಾವಿರ ವರ್ಷಗಳಲ್ಲಿ ರಾಜಕೀಯ ಅರ್ಥಶಾಸ್ತ್ರ ಯುದ್ಧ ಮತ್ತು ಸಮೂಹ ಚಳುವಳಿಗಳು ಒಡ್ಡಿದ ಸವಾಲುಗಳನ್ನು ಎದುರಿಸಲು ಈ ಪರಂಪರೆಗಳು ಪಡೆದುಕೊಂಡಿರುವ ರೂಪಗಳಾವುವು?
3. ಒಂದು ಭಾಷೆಯಲ್ಲಿ ಹುದುಗಿರುವ ಆಯಾ ಪ್ರದೇಶದ ಜನರು ಪರಸ್ಪರ ಹಂಚಿಕೊಂಡ ಇತಿಹಾಸ, ಸಂಸ್ಕೃತಿ, ನಂಬಿಕೆ, ಆಚರಣೆಗಳು ಸಮತೆ ಮತ್ತು ನ್ಯಾಯವನ್ನು ಉತ್ತೇಜಿಸುವ ಸಾಮೂಹಿಕ ಅಸ್ಮಿತೆಯನ್ನು ಪ್ರೋತ್ಸಾಹಿಸುತ್ತವೆಯೇ?
4. ಪ್ರಸ್ತುತ ಜಾಗತಿಕ ಸಂದರ್ಭದಲ್ಲಿ ತಮ್ಮ ಅಸ್ತಿತ್ವವನ್ನು ಕಟ್ಟಿಕೊಳ್ಳಲು ಯುವಕ ಯುವತಿಯರು ತಮ್ಮ ಭಾಷೆ ಮತ್ತು ಜ್ಞಾನ ಪರಂಪರೆಗಳಿಂದ ಏನನ್ನು ಕಲಿಯಬೇಕಿದೆ?

 

bottom of page