ಅಭಿವೃದ್ಧಿಯ ಪ್ರಕ್ರಿಯೆಯಲ್ಲಿ ಜ್ಞಾನದ ಆಯ್ಕೆಗಳ ಬಗ್ಗೆ ವಿಚಾರವಿನಿಮಯಕ್ಕಾಗಿ ಒಂದು ವೇದಿಕೆ
ಆಯೋಜಕರು: ಕುವೆಂಪು ವಿಶ್ವವಿದ್ಯಾಲಯ ಶಿವಮೊಗ್ಗೆ,
ಮತ್ತು
ಜರ್ನಲ್ ಆಫ್ ಡೈಲಾಗ್ಸ್ ಆನ್ ನಾಲೆಡ್ಜ್ ಇನ್ ಸೊಸೈಟಿ, ಚೆನ್ನೈ
(ಸಮಾಜದಲ್ಲಿರುವ ಜ್ಞಾನವನ್ನು ಕುರಿತಾದ ಸಂವಾದಕ್ಕೆ ಮೀಸಲಾಗಿರುವ ನಿಯತಕಾಲಿಕೆ)
ಮೊದಲ ಪ್ರಕಟಣೆ: (English)
ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಸಮಾಜದಲ್ಲಿನ ಜ್ಞಾನದ ಕುರಿತಾದ ಈ ಸಮಾವೇಶವೂ 75 ವರ್ಷಗಳ ರಾಷ್ಟ್ರ ನಿರ್ಮಾಣ ಹಾಗೂ ಅಭಿವೃದ್ಧಿಯ ದಾರಿಯಲ್ಲಿ ಜ್ಞಾನದ ಬಗೆಗಿನ ಪ್ರಶ್ನೆಗಳು ಹಾಗೂ ವಿಜ್ಞಾನ ಮತ್ತುಖ ತಂತ್ರಜ್ಞಾನದ ಪ್ರಶ್ನೆಗಳನ್ನು ಚರ್ಚಿಸುವ ಮುಕ್ತ ವೇದಿಕೆಯಾಗಿದೆ. ನಮ್ಮ ದೇಶದ ಬಹುಪಾಲು ಜನರು ಬಡತನ ಮತ್ತು ಸಂಕಷ್ಟಗಳಲ್ಲಿ ಬದುಕು ಸವೆಸುತ್ತಿರುವುದಕ್ಕೆ ಜ್ಞಾನ ವಲಯದಲ್ಲಿ ಈಗಾಗಲೇ ಮಾಡಲ್ಪಟ್ಟಿರುವ ಆಯ್ಕೆಗಳು ಹಾಗೂ ಮಾಡಲಾಗುತ್ತಿರುವ ಜ್ಞಾನದ ಆಯ್ಕೆಗಳು ಹೇಗೆ ಕಾರಣೀಭೂತವಾಗಿದೆ ಎಂಬುದನ್ನು ಈ ಸಮಾವೇಶದಲ್ಲಿ ಚರ್ಚಿಸಲಾಗುವುದು .ದೇಶದ ಅಭಿವೃದ್ಧಿಯಲ್ಲಿ ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಪಾತ್ರದ ಬಗ್ಗೆ ಹಿಂದಿನಿಂದಲೂ ಚರ್ಚೆಗಳು ನಡೆಯುತ್ತಿವೆಯಾದರೂ ಮಾನವ ಬದುಕಿನ ಇತರೆ ಜ್ಞಾನ ವಲಯಗಳಾದ ಅರ್ಥಶಾಸ್ತ್ರ, ರಾಜಕೀಯ, ಸಮಾಜ ವಿಜ್ಞಾನ, ಕಲೆ ,ತತ್ವಶಾಸ್ತ್ರ ,ಸಾಮಾಜಿಕ ಸಂಘಟನೆ, ಕುಟುಂಬ ಮುಂತಾದ ವಿಷಯಗಳ ಕುರಿತು ವಿಮರ್ಶಾತ್ಮಕ ಚಿಂತನೆಗಳು ನಡೆದಿಲ್ಲ. ಹಾಗೆಯೇ ನ್ಯಾಯ, ಸ್ವಾತಂತ್ರ್ಯ ಹಾಗೂ ಸುಸ್ಥಿರತೆ ಅಂತಹ ವಿಷಯಗಳಿಗೆ ಸಿಕ್ಕಂತಹ ಪ್ರಾಮುಖ್ಯತೆ ಜ್ಞಾನಕ್ಕೆ ಸಂಬಂಧಿಸಿದ ವಿಷಯಗಳಿಗೆ ಸಿಕ್ಕಿಲ್ಲ. ಇದರಿಂದ ಸ್ಪಷ್ಟವಾಗುವುದೇನೆಂದರೆ ನಮ್ಮ ಬಹುಪಾಲು ಬಿಕ್ಕಟ್ಟುಗಳನ್ನು ಪರಿಹರಿಸಿಕೊಳ್ಳಲು ಬಿಕ್ಕಟ್ಟುಗಳ ಒಡಲಲ್ಲೇ ಇರುವ ಜ್ಞಾನ ಮತ್ತು ಅದರ ಮೂಲ ತತ್ವಗಳ ಪ್ರಶ್ನೆಗಳನ್ನು ಎದುರುಗೊಳ್ಳುವುದು ಮುಖ್ಯ. ಆದರೆ ಅಧಿಕಾರ ,ಆಸಕ್ತಿ ಆದ್ಯತೆಗಳ ಆಚೆ ಅದು ಅಂತಹ ಪ್ರಾಮುಖ್ಯತೆಯನ್ನು ಪಡೆದಿಲ್ಲ. ಇತಿಹಾಸದುದ್ದಕ್ಕೂ ಬೇರೆ ಬೇರೆ ಸಮುದಾಯಗಳು ಮತ್ತು ಸಂಸ್ಕೃತಿಗಳು ತಮ್ಮ ನಾಗರಿಕತೆಯ ಗೊತ್ತು ಗುರಿಗಳನ್ನು ಹೊಂದುವಂತಹ ತಮ್ಮದೇ ಬಗೆಯ ಜ್ಞಾನ ವ್ಯವಸ್ಥೆ ಮತ್ತು ಆಚರಣೆಗಳನ್ನು ಬೆಳೆಸಿಕೊಂಡಿರುವುದನ್ನು ವ್ಯಾಪಕವಾಗಿ ಗುರುತಿಸಿಲ್ಲ. ಆಧುನಿಕ ವ್ಯವಸ್ಥೆ ಮತ್ತು ಆಚರಣೆಗಳ ಮೂಲವಾಗಿರುವ ಪಾಶ್ಚಾತ್ಯ ಜಗತ್ತು ಅಂತಹವುಗಳಲ್ಲಿ ಒಂದು. ಜ್ಞಾನ ಮತ್ತು ಅದರ ಆಚರಣೆಗಳು ನಮ್ಮ ಸಮಾಜದ ಬಹುಪಾಲು ಜನರ ವಿವಿಧ ವಲಯಗಳಲ್ಲಿ( ಆಹಾರ, ಪೌಷ್ಟಿಕತೆ, ವಸತಿ ,ಸಾರಿಗೆ, ಕೃಷಿ, ನೀರಾವರಿ, ಜವಳಿ ,ಗುಡಿ ಕೈಗಾರಿಕೆ, ಸಾಮಾಜಿಕ ಸಂಘಟನೆಗಳು, ಕಲೆ, ಕುಟುಂಬ ಇತ್ಯಾದಿ) ಇನ್ನೂ ವ್ಯಾಪಕವಾಗಿ ವಿಭಿನ್ನ ಪ್ರಮಾಣಗಳಲ್ಲಿ ಅಸ್ತಿತ್ವದಲ್ಲಿದೆ. ಈ ಜ್ಞಾನವು ಆಧುನಿಕ, ಕೇಂದ್ರೀಕೃತ ,ಶ್ರೇಣಿಕೃತ ಸಾಂಸ್ಥಿಕ ರೂಪದಲ್ಲಿರುವ ವಿಶ್ವವಿದ್ಯಾಲಯಗಳು, ಪ್ರಯೋಗ ಶಾಲೆಗಳು, ಅಧ್ಯಯನ ಕೇಂದ್ರಗಳು ಮುಂತಾದ ಸಂಸ್ಥೆಗಳಲ್ಲಿನ ಜ್ಞಾನಕ್ಕಿಂತ ಭಿನ್ನವಾದದ್ದು. ಆದ್ದರಿಂದ ಈ ಸಮಾಜದ ಜ್ಞಾನವು ಆಧುನಿಕ/ ಪರಂಪರೆ, ಪಾಶ್ಚಿಮಾತ್ಯ /ಪೌರಾತ್ಯ, ಸಂಘಟಿತ /ಜಾನಪದ, ಮುಂತಾದ ವರ್ಗೀಕರಣಗಳನ್ನು ಮೀರಿ ಅದಕ್ಕೆ ಸೂಕ್ತವಾದ ಮೌಲ್ಯ ಮತ್ತು ಸಂಸ್ಕೃತಿಗಳನ್ನು ಒಳಗೊಂಡಿರುವ ಜೀವಂತವಾದ ಮತ್ತು ವಿಕಾಸವಾಗುತ್ತಿರುವ ವಲಯವಾಗಿದೆ. PPST ಸಂಸ್ಥೆಯ ಈ ಹಿಂದಿನ ಕಾರ್ಯಕ್ರಮಗಳ ಫಲಿತವಾಗಿ "ಸಮಾಜದಲ್ಲಿ ಜ್ಞಾನದ ಬಗೆಗಿನ ಸಂವಾದಗಳು" ಎಂಬ ನಿಯತಕಾಲಿಕ ರೂಪುಗೊಂಡಿದೆ. ಇದು ಕೂಡ ಅದೇ ಬಗೆಯ ಕೆಲಸಗಳನ್ನು ಕೈಗೊಳ್ಳಲಿದೆ. ಈ ಸಮಾವೇಶದಲ್ಲಿ ಎಲ್ಲರನ್ನೂ ಒಳಗೊಂಡು ಮುಕ್ತವಾದ ರೀತಿಯಲ್ಲಿ ಸಂವಾದವನ್ನು ಮುಂದುವರೆಸುವ ಇರಾದೆ ಇದೆ. ಮೈಸೂರು ವಿಶ್ವವಿದ್ಯಾನಿಲಯದಿಂದ ರೂಪಗೊಂಡ ಕುವೆಂಪು ವಿಶ್ವವಿದ್ಯಾನಿಲಯವು ಜ್ಞಾನ ಮೀಮಾಂಸೆ ಅಥವಾ ಜ್ಞಾನದ ಪ್ರಶ್ನೆಗಳನ್ನು ಶಿಕ್ಷಣ ಮತ್ತು ಸಂಶೋಧನೆಗಳಲ್ಲಿ ಒಳಗೊಳ್ಳುತ್ತಾ ಬಂದಿದೆ.
ಸಮಾವೇಶದ ಕೆಲವು ವಿಷಯಗಳು:
ನಮ್ಮ ದೇಶದ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಮಾಡಲಾದ ವಿಜ್ಞಾನ ಮತ್ತು ತಂತ್ರಜ್ಞಾನಗಳ ಆಯ್ಕೆಗಳು ಸೇರಿದಂತೆ ಜ್ಞಾನದ ಆಯ್ಕೆಗಳು, ಅದರ ಕಾರಣಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಫಲಿತಾಂಶಗಳ ಮೇಲೆ ಅವುಗಳ ಪ್ರಭಾವವನ್ನು ಪರಿಶೀಲಿಸುವುದು ಸಮಾವೇಶದ ಮುಖ್ಯ ಉದ್ದೇಶಗಳಲ್ಲಿ ಒಂದಾಗಿದೆ.
ನಮ್ಮ ಆರ್ಥಿಕತೆಯ ಕೆಲವು ಪ್ರಮುಖ ಕ್ಷೇತ್ರಗಳಲ್ಲಿ ಮಾಡಲಾದ ಜ್ಞಾನದ ಆಯ್ಕೆಗಳು:
ತಮ್ಮ ಅಸಮರ್ಪಕ ಕಾರ್ಯಕ್ಷಮತೆಯಿಂದಾಗಿ ನಮ್ಮ ದೇಶದ ಬಹುಪಾಲು ಜನರನ್ನು ತೊಂದರೆಗೀಡು ಮಾಡಿರುವ ಕೆಲವು ಮುಖ್ಯ ವಲಯಗಳು ಈ ಕೆಳಗಿನಂತಿವೆ: ಆಹಾರ ಮತ್ತು ಪೌಷ್ಟಿಕತೆ, ಕುಡಿಯುವ ನೀರು, ಶೌಚಾಲಯ ಮತ್ತು ಶುಚಿತ್ವ, ಕೃಷಿ ,ನೀರಾವರಿ ಮತ್ತು ಪ್ರಾಣಿ ಸಾಕಾಣಿಕೆ ,ಭೂಮಿ ಮತ್ತು ಅರಣ್ಯ ,ವಸತಿ ಮತ್ತು ವಾಸ್ತವ್ಯ ,ಆರೋಗ್ಯ ಮತ್ತು ಔಷಧಿ ,ಬಟ್ಟೆ ಮತ್ತು ಜವಳಿ, ಕೈಗಾರಿಕಾ ಅಭಿವೃದ್ಧಿ, ಪರಿಸರ ಮತ್ತು ಜೀವ ವ್ಯವಸ್ಥೆ ,ಸಾಕ್ಷರತೆ ಮತ್ತು ಶಾಲಾ ಶಿಕ್ಷಣ ,ಸ್ಥಳೀಯ ಆಡಳಿತ ಮುಂತಾದವು. ಈ ಸಮಾವೇಶದಲ್ಲಿ ಸ್ವಾತಂತ್ರ ಕಾಲದಿಂದಲೂ ಬೇರೆ ಬೇರೆ ವಲಯಗಳಲ್ಲಿ ಮಾಡಲಾದ ಜ್ಞಾನದ ಆಯ್ಕೆಗಳು ಅದಕ್ಕೆ ಕಾರಣಗಳು ಹಾಗೂ ಆಯ್ಕೆಯ ಪ್ರಕ್ರಿಯೆ ಅಥವಾ ತಿರಸ್ಕರಿಸಿದ ಕಾರಣಗಳು ಇವೆಲ್ಲವುಗಳ ಕುರಿತು ಆಯಾ ವಲಯಗಳ ಅನುಭವಿ ಹಾಗೂ ಪರಿಣಿತಿ ಹೊಂದಿದ ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸಲಾಗುವುದು. ಈ ಆಯ್ಕೆಗಳಲ್ಲಿ ಯಾವುದಾದರೂ ನಮಗೆ ಇನ್ನು ಲಭ್ಯವಿದೆಯೇ ಅಥವಾ ಇಲ್ಲವೇ , ಲಭ್ಯವಿದ್ದಲ್ಲಿ ಅವುಗಳನ್ನು ಪರೀಕ್ಷಿಸಿ ಅಳವಡಿಸಿಕೊಳ್ಳಬೇಕು ಎಂದು ಅವರು ನಮಗೆ ತಿಳಿಸುತ್ತಾರೆ.
ಜ್ಞಾನವ್ಯವಸ್ಥೆಗಳಲ್ಲಿರುವ ಕೆಲವು ಬಿಕಟ್ಟುಗಳು:
ಭಾರತದ ಸ್ವಾತಂತ್ರದ ಸಂದರ್ಭದಲ್ಲಿ ಎರಡು ಬಹು ಮುಖ್ಯ ಜ್ಞಾನ ಶಿಸ್ತುಗಳಿದ್ದವು. ಒಂದು, 18ನೇ ಶತಮಾನದಲ್ಲಿ ಪಾಶ್ಚಿಮಾತ್ಯ ಮೂಲದ ವಸಾಹತುಶಾಹಿಯ ಭಾಗವಾಗಿ ಭಾರತಕ್ಕೆ ಪರಿಚಯಿಸಲ್ಪಟ್ಟ ಜ್ಞಾನ ಶಿಸ್ತು, ಮತ್ತೊಂದು ಬಹುಕಾಲದಿಂದ ಇಲ್ಲಿಯ ಸಮಾಜ ಮತ್ತು ಆರ್ಥಿಕತೆಗೆ ಒತ್ತಾಸೆಯಾಗಿದ್ದ ಸ್ಥಳೀಯ ಮೂಲದ ಜ್ಞಾನ ವ್ಯವಸ್ಥೆ. ಈ ಎರಡು ಜ್ಞಾನ ಶಿಸ್ತುಗಳ ಮೂಲತತ್ವದಲ್ಲಿನ ಭಿನ್ನತೆಗಳನ್ನು ಈ ಸಮಾವೇಶದಲ್ಲಿ ಚರ್ಚಿಸಲು ಪ್ರಯತ್ನಿಸಲಾಗುವುದು .ಹಾಗೂ ಈ ಭಿನ್ನತೆಗಳು ಈ ಹಿಂದಿನ ಜ್ಞಾನದ ಆಯ್ಕೆಗಳ ಮೇಲೆ ಉಂಟು ಮಾಡಿದ ಪರಿಣಾಮಗಳ ಕುರಿತು ಚರ್ಚಿಸಲಾಗುವುದು.
ಈ ಎರಡು ವ್ಯವಸ್ಥೆಗಳು ಸಮಾಜದಲ್ಲಿ ಸಂಘಟಿತವಾಗುವ ರೀತಿಯಲ್ಲಿ ಗಮನಾರ್ಹ ಭಿನ್ನತೆ ಇದೆ ಎಂದು ತಿಳಿದಿದೆ. ಸಮಾಜದಲ್ಲಿನ ಜ್ಞಾನವು ದೇಶಿಯ ಜ್ಞಾನ ಪರಂಪರೆಗಳು ಸಂಘಟಿತಗೊಳ್ಳುವ ಹಾಗೂ ಪರಿಸ್ಥಿತಿಗೆ ಅನುಗುಣವಾಗಿ ಹೊಸ ಹುಟ್ಟು ಪಡೆಯುವ ದಾರಿಯಾಗಿ ತೋರುತ್ತದೆ. ಕೇಂದ್ರೀಕೃತ ಮತ್ತು ಆಕ್ರಮಣಕಾರಿ ಸರ್ಕಾರದ ಅಡಿಯಲ್ಲಿ ಸಮಾಜದಲ್ಲಿ ಜ್ಞಾನ ಶಿಸ್ತುಗಳ ಸಂಘಟನೆಯ ಭಿನ್ನತೆಯು ಅವುಗಳ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರಲು ಕಾರಣವಾಗುತ್ತದೆಯೇ? ಸ್ವರಾಜ್ಯದ ಆಲೋಚನೆಯು ಇಂದಿಗೂ ಜ್ಞಾನವಲಯದ ಆಯ್ಕೆಗಳನ್ನು ಮಾಡುವಾಗ ಏನಾದರೂ ಪ್ರಭಾವ ಬೀರುತ್ತದೆಯೇ? ಜ್ಞಾನ ಮತ್ತು ಅದರ ಸಂಬಂಧಗಳು ಸಮಾವೇಶದಲ್ಲಿ ಜ್ಞಾನಕ್ಕೆ ಸಂಬಂಧಿಸಿದಂತೆ ಪರಿಶೀಲಿಸಬೇಕಾದ ಕೆಲವು ಅಂಶಗಳಿವೆ .ಉದಾಹರಣೆಗೆ ಅಧಿಕಾರದೊಂದಿಗೆ ಜ್ಞಾನದ ಸಂಬಂಧ, ಕಲೆ ಸಿನಿಮಾ ಹಾಗೂ ಮಾಧ್ಯಮದೊಂದಿಗೆ ಜ್ಞಾನದ ಸಂಬಂಧ, ಸಾಮಾಜಿಕ ಸಂಬಂಧಗಳಲ್ಲಿ ಹಾಗೂ ಕುಟುಂಬದ ಮೇಲೆ ಜ್ಞಾನದ ಪಾತ್ರ ಮುಂತಾದ ವಿಷಯಗಳನ್ನು ಚರ್ಚಿಸಲಾಗುತ್ತದೆ. ಪರಿಸರ ಚಳುವಳಿ, ರೈತ ಚಳುವಳಿ, ಮಹಿಳಾ ಚಳುವಳಿ, ಬುಡಕಟ್ಟು ಚಳುವಳಿಗಳ ಜ್ಞಾನದ ಆಧಾರ ಯಾವುದು? ಎಂಬ ಪ್ರಶ್ನೆಗಳನ್ನು ಚರ್ಚಿಸಲಾಗುತ್ತದೆ.
ಇನ್ನೂ ಮುಂದುವರೆದು:
ನಮ್ಮ ದೇಶವನ್ನು ಇಂದಿಗೂ ಕಾಡುತ್ತಿರುವ ಜ್ವಲಂತ ಸಮಸ್ಯೆಯಾಗಿರುವ ಬಡತನವನ್ನು ನಿವಾರಿಸಲು ಜ್ಞಾನ ವಲಯವು ತೆಗೆದುಕೊಂಡಿರುವ ಕ್ರಮಗಳ ಕುರಿತು ಸಮಾವೇಶದಲ್ಲಿ ಚರ್ಚಿಸುವುದು ಬಹು ಮುಖ್ಯ ಆದ್ಯತೆಯಾಗಿದೆ. ಭಾರತ ದೇಶ ಹಾಗೂ ಭಾರತೀಯರ ಅಗತ್ಯತೆಯನ್ನು ಪೂರೈಸಲು ವಿಜ್ಞಾನ ಮತ್ತು ತಂತ್ರಜ್ಞಾನದ ಅಂಶಗಳು ಸೇರಿದಂತೆ ಆಧುನಿಕ ಜ್ಞಾನವನ್ನು ಪರಿಣಾಮಕಾರಿಯಾಗಿ ಮರು ಸಂಘಟಿಸಿ, ಅಳವಡಿಸಬೇಕಾಗಿದೆ ಎಂಬುದನ್ನು ನಾವು ಗ್ರಹಿಸಬೇಕಿದೆ. ಈ ವಿಷಯಗಳ ಜೊತೆಗೆ ಡಿಜಿಟಲ್, ಇಂಟರ್ನೆಟ್ ಹಾಗೂ ಕೃತಕ ಬುದ್ಧಿ ಮತ್ತೆಯಂತಹ ಬೆಳವಣಿಗೆಗಳ ಜೊತೆಗೆ ಜ್ಞಾನದ ಬದಲಾವಣೆಯನ್ನು ಗಣನೆಗೆ ತೆಗೆದುಕೊಳ್ಳಬೇಕಿದೆ. ಇದೇ ಬಗೆಯ ಕೆಲಸವನ್ನು ಅಭಿವೃದ್ಧಿಯ ಪ್ರಕ್ರಿಯೆಗಳಿಗೂ ಭಾರತೀಯ ಮೂಲದ ಜ್ಞಾನ ಶಿಸ್ತುಗಳು ಮತ್ತು ಅದರ ಮೌಲ್ಯದ ಪ್ರಸ್ತುತತೆಯನ್ನು ಪರೀಕ್ಷಿಸಬೇಕಿದೆ. ಜ್ಞಾನದ ಸಂರಕ್ಷಣೆಯಿಂದ ಜ್ಞಾನದ ನವೀಕರಣದ ಪ್ರಾಮುಖ್ಯತೆಯನ್ನು ಹೇಗೆ ಬದಲಾಯಿಸಬಹುದು? ಎರಡು ಜ್ಞಾನ ಪರಂಪರೆಗಳ ಪಾಲುದಾರಿಕೆಯ ಆಲೋಚನೆಯನ್ನು ಹೇಗೆ ರೂಪಿಸುವುದು ಹಾಗೂ ಪ್ರೇರೇಪಿಸುವುದು. ಭಾರತೀಯ ಜ್ಞಾನ ವ್ಯವಸ್ಥೆಯು ಭೌತಿಕ ಜಗತ್ತನ್ನು ಮೀರಿ ಸಾಮಾಜಿಕ ಸಾಂಸ್ಕೃತಿಕ ಕಲಾತ್ಮಕ ನೈತಿಕ ಮತ್ತು ಕೌಟುಂಬಿಕ ಆಯಾಮಗಳನ್ನು ಒಳಗೊಳ್ಳಬೇಕು. ನಮ್ಮ ಸಮಾಜದಲ್ಲಿ ಭಾರತೀಯ ಜ್ಞಾನ ವ್ಯವಸ್ಥೆಯು ಶ್ರೇಷ್ಠ ವ್ಯವಸ್ಥೆಯಾಗಿತ್ತು ಹಾಗೂ ಅದು ಸಾಮಾನ್ಯ ಜನರ ಬದುಕು ಮತ್ತು ಜ್ಞಾನದ ಜೊತೆಗೆ ವ್ಯಕ್ತಿರಿಕ್ತ ಸಂಬಂಧ ಹೊಂದಿತ್ತು ಎಂಬ ಅಭಿಪ್ರಾಯವನ್ನು ಪರೀಕ್ಷಿಸಬೇಕಾಗಿದೆ.
ಜ್ಞಾನದ ಹೊಸ ಅಕಾಡೆಮಿ?
ಜ್ಞಾನದ ಸೈದಾಂತಿಕ ಮತ್ತು ಪ್ರಾಯೋಗಿಕ ಪ್ರಶ್ನೆಗಳನ್ನು ಹೊಸ ರೀತಿಯಲ್ಲಿ ಮಂಡಿಸಲು ಹಾಗೂ ಅದಕ್ಕನುಗುಣವಾಗಿ ಕಾರ್ಯಕ್ರಮಗಳನ್ನು ರೂಪಿಸಲು ಹೊಸ ರೀತಿಯ ಅಕಾಡೆಮಿಯ ಅಗತ್ಯ ಇದೆಯೇ? ಈ ಸಮಾವೇಶದಲ್ಲಿ ಅಂತಹ ಸಂಸ್ಥೆಯನ್ನು ಸ್ಥಾಪಿಸುವ ಕುರಿತು ಚಿಂತನೆ ನಡೆಸಲಾಗುವುದು.
ಸಂಪರ್ಕಿಸಿ
ಪ್ರೊ|| ಸಿ. ಎನ್. ಕೃಷ್ಣನ್ (ನಿವೃತ್ತ) ಪ್ರೊ|| ಮೇಟಿ ಮಲ್ಲಿಕಾರ್ಜುನ
ಡಾ।। ಜ. ಕ. ಸುರೇಶ ಪ್ರೊ|| ಬಿ ವಿ ರಾಮಪ್ರಸಾದ್
ಜರ್ನಲ್ ಆಫ್ ಡೈಲಾಗ್ಸ್ ಆನ್ ನಾಲೆಡ್ಜ್ ಇನ್ ಸೊಸೈಟಿ, ಕುವೆಂಪು ವಿಶ್ವವಿದ್ಯಾಲಯ
ಚೆನ್ನೈ, ತಮಿಳುನಾಡು ಶಿವಮೊಗ್ಗೆ, ರ್ನಾಟಕ
(ಸಮಾಜದಲ್ಲಿರುವ ಜ್ಞಾನವನ್ನು ಕುರಿತಾದ ಸಂವಾದಕ್ಕೆ
ಮೀಸಲಾಗಿರುವ ನಿಯತಕಾಲಿಕೆ)
ಅಂತರ್ಜಾಲತಾಣ: https://www.ppstindia.in/convention
ಮಿಂಚಂಚೆ (email): dialoguesonknowledge@gmail.com